ಇಂಡಿಯನ್ ಎಕ್ಸ್‍ಪ್ರೆಸ್

	ಪ್ರಸಿದ್ಧ ಕೈಗಾರಿಕೋದ್ಯಮ ರಾಮನಾಥ ಗೋಯೆಂಕಾ ಅವರು `ಎಕ್ಸ್‍ಪ್ರೆಸ್ ಬಳಗ ಪ್ರಾರಂಭಿಸಿದರು. ಫ್ರೀಫ್ರೆಸ್ ಗುಂಪಿನ ಒಡೆತನದಲ್ಲಿದ್ದ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ್ನು 1935ರಲ್ಲಿ ಗೋಯೆಂಕಾ ಪಡೆದುಕೊಂಡರು. ಎಕ್ಸ್‍ಪ್ರೆಸ್ ಪತ್ರಿಕೆ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಹೋರಾಟದ ಧ್ವನಿಯಾಗಿತ್ತು. ಸ್ವಾತಂತ್ರ್ಯಾನಂತರ ತನಿಖಾವರದಿಗಳ ಮೂಲಕ ಭ್ರಷ್ಟಾಚಾರದ ಮುಖಗಳನ್ನು ಬಯಲು ಮಾಡುವ ನಿರ್ಭೀತ ಪತ್ರಿಕೆಯಾಯಿತು. ಎಕ್ಸ್‍ಪ್ರೆಸ್ ಬಳಗದ ಪತ್ರಿಕೆಗಳ ಒಡೆಯರಾಗಿದ್ದ ರಾಮನಾಥ ಗೋಯೆಂಕಾ ಭಾರತಾದ್ಯಂತ ಪತ್ರಿಕೆಗಳ ಜಾಲ ಹೆಣೆದು ಪತ್ರಿಕೋದ್ಯಮದ ಒಬ್ಬ ಧೀಮಂತ ವ್ಯಕ್ತಿ ಎನಿಸಿಕೊಂಡರು.

	ಮುಂಬೈಯಲ್ಲಿ ಪ್ರಕಟವಾಗುತ್ತಿದ್ದ `ಮಾರ್ನಿಂಗ್ ಸ್ಟಾಂಡರ್ಡ್ ದೆಹಲಿಯಲ್ಲಿ ಪ್ರಕಟವಾಗುತಿದ್ದ `ನ್ಯೂಸ್ ಕ್ರೌನಿಕಲ್ ಪತ್ರಿಕೆಗಳನ್ನು ಎಕ್ಸ್‍ಪ್ರೆಸ್ ಬಳಗಕ್ಕೆ ಸೇರಿಸಿಕೊಳ್ಳುವುದರ ಮೂಲಕ ಎಕ್ಸ್‍ಪ್ರೆಸ್ ಸಾಮ್ರಾಜ್ಯದ ವಿಸ್ತರಣೆ ಕಾರ್ಯವನ್ನು ಸಾಹಸ ಮತ್ತು ಕೆಚ್ಚಿನಿಂದ ಗೋಯೆಂಕಾ ನಿರ್ವಹಿಸಿದರು. 

	ಭಾರತದ ಪತ್ರಿಕಾ ಸಮೂಹದಲ್ಲಿ ಅಗ್ರ ಮಾನ್ಯ ಸ್ಥಾನಗಳಿಸಿದ್ದ ಎಕ್ಸ್‍ಪ್ರೆಸ್ ಬಳಗ ಈಚಿನ ವರ್ಷಗಳಲ್ಲಿ ತೀವ್ರ ಪೈಪೋಟಿ ಎದುರು ಕೆಲವು ಪ್ರದೇಶಗಳಲ್ಲಿ ಸೊರಗಿದಂತೆ ಕಾಣುತ್ತದೆಯಾದರೂ ಅದರ ದಿಟ್ಟ ನಿಲುವುಗಳು, ಹೋರಾಟದ ಮನೋಧರ್ಮಗಳನ್ನು ಉಳಿಸಿಕೊಂಡ ಕೆಲವೇ ಪತ್ರಕೆಗಳಲ್ಲಿ ಒಂದು ಎನಿಸಿಕೊಂಡಿದೆ. 

	ಕಳೆದ ದಶಕದಲ್ಲಿ ಎಕ್ಸ್‍ಪ್ರೆಸ್ ಒಡೆತನದ ವಿಚಾರದಲ್ಲಿ (ರಾಮನಾಥ ಗೋಯೆಂಕಾ ಅವರ ನೀಧನಾನಂತರ) ಭಿನ್ನಾಭಿಪ್ರಾಯಗಳು ತಲೆದೋರಿ ಉತ್ತರ ಮತ್ತು ದಕ್ಷಿಣದಲ್ಲಿ ಎರಡು ಪ್ರತ್ಯೇಕ ಅಸ್ತಿತ್ವಗಳಲ್ಲಿ ಮುಂದುವರಿದಿದೆ. 

	ಮುಂಬೈಯನ್ನ ಪ್ರಧಾನ ಕಛೇರಿಯನ್ನಾಗುಳ್ಳ ನ್ಯೂಸ್‍ಪೇಪರ್ಸ್ (ಬಾಂಬೆ) ಲಿಮಿಟೆಡ್ 'ದಿ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಭಾರತದ ಉತ್ತರ ಮತ್ತು ಪಶ್ಚಿಮ ಪ್ರಾಂತ್ಯಗಳಲ್ಲಿ ಪತ್ರಿಕಾಜಾಲ ವ್ಯಾಪಿಸಿಕೊಂಡು ಮುಂಬೈ, ಪುಣೆ, ನಾಗಪುರ, ಅಹಮದಾಬಾದ್, ಏಡೋದರ, ದೆಹಲಿ, ಚಂಡೀಘಡ ಮತ್ತು ಲಖನೌ-ಈ ಎಂಟು ಕಡೆಗಳಿಂದ ಪ್ರಕಟವಾಗುತ್ತಿದೆ.  ವಿವೇಕ ಗೊಯೆಂಕಾ ಈ ಪತ್ರಿಕಾ ಸಮೂಹದ ಇಂಡಿಯನ್ ಎಕ್ಸ್‍ಪ್ರೆಸ್ ನ್ಯೂಸ್‍ಪೇಪರ್ಸ್ ಬಾಂಬೆ ಲಿ., ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕರು. 

	ಚೆನ್ನೈನಲ್ಲಿ ಪ್ರಧಾನ ಕಛೇರಿ ಇರುವ ಎಕ್ಸ್‍ಪ್ರೆಸ್ ಪಬ್ಲಿಕೇಶನ್ಸ್ (ಮಧುರೈ) ಲಿಮಿಟೆಡ್ (ಇಪಿಎಂಎಲ್) ಸಂಸ್ಥೆ ದಕ್ಷಿಣ ಪ್ರಾಂತ್ಯದಲ್ಲಿ `ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯನ್ನು ಒಟ್ಟು ಹದಿನಾಲ್ಕು ಕೇಂದ್ರಗಳಿಂದ ಪ್ರಕಟಿಸುತ್ತಿದೆ.

	`ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಚೆನ್ನೈ, ಮಧುರೈ, ಕೊಯಿಮತ್ತೂರು, ತಿರುಚಿ ಕೋಜಿಕೋಡ್, ತಿರುವನಂತಪುರ, ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣ, ಭುವನೇಶ್ವರ-ಇವೇ ಈ ಹದಿನಾಲ್ಕು ಕೇಂದ್ರಗಳು. ಇಪಿಎಂಎಲ್ ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಮನೋಜ್ ಕುಮಾರ್ ಸೊಂತಾಲಿಯ.

	`ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್  ಬಳಗದಲ್ಲಿ ಕನ್ನಡದಲ್ಲಿ ಕನ್ನಡಪ್ರಭ (ನಾಲ್ಕು ಕೇಂದ್ರಗಳಿಂದ) ತಮಿಳಿನಲ್ಲಿ ದಿನಮಣಿ (ನಾಲ್ಕು ಕೇಂದ್ರಗಳಿಂದ) ದಿನ ಪತ್ರಿಕೆಗಳಿವೆ. ದಿನ ಪತ್ರಿಕೆಗಳಲ್ಲದೆ ಈ ಸಂಸ್ಥೆಯ ತಮಿಳಿನಲ್ಲಿ ಪಕ್ಷ ಪತ್ರಿಕೆ, ಸಿನಿಮಾ ಎಕ್ಸ್‍ಪ್ರೆಸ್, ತಮಿಳಿನಲ್ಲಿ ವಾರ ಪತ್ರಿಕೆ  ಟ್ಯಾಮಿಲಿಯನ್ ಎಕ್ಸ್‍ಪ್ರೆಸ್, ಮಲೆಯಾಳಂನಲ್ಲಿ ಮಲೆಯಾಳಂ ವಾರಿಕಾ ವಾರಪತ್ರಿಕೆಯನ್ನು ಪ್ರಕಟಿಸುತ್ತಿದೆ. 

	ಇಪಿಎಂಎಲ್ ಎಂದು ಪ್ರಮುಖ ಇಂಟರ್‍ನೆಟ್ ಪ್ರಕಾಶಕ ಕೂಡಾ. ಇಂಡಿಯಾ ವಾರ್ತಾ, ನ್ಯೂಇಂಡ್‍ಪ್ರೆಸ್, ಕನ್ನಡಪ್ರಭ, ದಿನಮಣಿ, ಸಿನಿಮಾ ಎಕ್ಸ್‍ಪ್ರೆಸ್, ಮಲೆಯಾಳಂ ವಾರಿಕಾ, ಟ್ಯಾಮಿಲಿಯನ್ ಎಕ್ಸ್‍ಪ್ರೆಸ್ ಮತ್ತು ಈವೆಂಟ್‍ಎಕ್ಸ್‍ಪ್ರೆಸ್ - ಈ ಎಂಟು ವೆಬ್  ಸೈಟುಗಳಿವೆ.

	ಎಕ್ಸ್‍ಪ್ರೆಸ್ ಪಬ್ಲಿಕೇಶನ್ಸ್ ಮಧುರೈ ಲಿಮಿಟೆಡ್ ಮತ್ತು ಇಂಡಿಯನ್ ಎಕ್ಸ್‍ಪ್ರೆಸ್ ನ್ಯೂಸ್‍ಪೇಪರ್ಸ್ ಬಾಂಬೆ ಲಿಮಿಟೆಡ್ ಎರಡು ಪ್ರತ್ಯೇಕ ಅಸ್ತಿತ್ವ ಹೊಂದಿಕೆಯಾದರೂ ಅಖಿಲ ಭಾರತ ಸುದ್ದಿ ಸಂಗ್ರಹಣೆ, ಹಂಚಿಕೆಯ ಬಗೆ ಪರಸ್ಪರ ಸಹಕಾರವಿದೆ. 						
(ಪರಿಷ್ಕರಣೆ: ಜಿ.ಎಸ್.ಸದಾಶಿವ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ